Tuesday, 16 August 2011

ಅರವತ್ತೈದರ ಸ್ವಾತಂತ್ರ್ಯದ ಮುನ್ನಾ ದಿನದ ಘಟನೆ : ನಾಯ್ಕನೂರಲ್ಲಿ ದಲಿತರಿಗೆ ಬಹಿಷ್ಕಾರ ... ಯಾರಿಗೂ ನಾಚಿಕೆ ಆಗದಿರಲಿ..!





 ದೌರ್ಜನ್ಯಕ್ಕೆ ಒಳಗಾದ ನಾಯ್ಕನೂರ ಗ್ರಾಮದ ದಲಿತರು ಭಾನುವಾರ ನವಲಗುಂದ ಪೊಲೀಸ್ ಠಾಣೆ ಎದುರು ಭಾನುವಾರ ಪ್ರತಿಭಟಿಸಿದರು

ನವಲಗುಂದ (ಧಾರವಾಡ ಜಿಲ್ಲೆ): ರೈತರ ಮನೆಯ ದನದ ಕೊಟ್ಟಿಗೆಯ ಸಗಣಿ ತೆಗೆಯಲು ದಲಿತರು ನಿರಾಕರಿಸಿದ್ದರಿಂದ ನಾಯ್ಕನೂರಲ್ಲಿ ಡಂಗುರ ಸಾರಿ, ದಲಿತ ಕುಟುಂಬದವರಿಗೆ ಬಹಿಷ್ಕಾರ ಹಾಕಿದ ಘಟನೆ ಭಾನುವಾರ ನಡೆದಿದೆ.
ದೌರ್ಜನ್ಯಕ್ಕೆ ಒಳಗಾದ ದಲಿತ ಕುಟುಂಬದವರು ಭಾನುವಾರ ಮುಂಜಾನೆ ನವಲಗುಂದ ಪೊಲೀಸ್ ಠಾಣೆಗೆ ಆಗಮಿಸಿ, ಆರೋಪಿಗಳನ್ನು ಬಂಧಿಸಿ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.
ನಾಯ್ಕನೂರ ಗ್ರಾಮದಲ್ಲಿ ಹೆಚ್ಚಾಗಿ ದಲಿತ ಕುಟುಂಬಗಳಿಂದಲೇ ಕೊಟ್ಟಿಗೆಯ ಸಗಣಿ ಬಳಿಸುತ್ತಾರೆ. ಆದರೆ ಇತ್ತೀಚೆಗೆ ಈ ಸಗಣಿ ಬಳಿಯುವುದರಿಂದ ಹೊಟ್ಟೆ ತುಂಬುವುದಿಲ್ಲ, ಬೇರೆ ಕೆಲಸ ಮಾಡುತ್ತೇವೆಂದು ದಲಿತರು ಹೇಳಿದ ಕಾರಣ ರೊಚ್ಚಿಗೆದ್ದ ಅಂದಾನಿಗೌಡ ಪಾಟೀಲ ಅವರು ಊರಲ್ಲಿ ಡಂಗುರ ಸಾರಿಸಿ, ಈ ದಲಿತ ಜನರಿಗೆ ಗ್ರಾಮದಲ್ಲಿ ಯಾರೂ ಕಿರಾಣಿ ಕೊಡಬಾರದು, ಚಹಾದ ಅಂಗಡಿಯಲ್ಲಿ ಚಹಾ ಕೊಡಬಾರದು, ಸರಕಾರಿ ಜಾಗದಲ್ಲಿ ಅಡ್ಡಾಡಲು ಬಿಡಬಾರದು, ಯಾರಾದರೂ ಇವರಿಗೆ ಸಹಾಯ ಮಾಡಿದರೆ ರೂ.5001 ದಂಡ ವಿಧಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಅಷ್ಟೇ ಅಲ್ಲದೇ ಬಸಪ್ಪ ಶಿವಪ್ಪ ಮಾದರ ಎಂಬುವವರಿಗೆ ಥಳಿಸಿ ಹಲ್ಲು ಮುರಿದು ಅವರ ಬಳಿ ಇದ್ದ 80 ಆಡುಗಳನ್ನು ಕಟ್ಟಿ ಹಾಕಿದ್ದಾರೆ. ವಿದ್ಯಾರ್ಥಿಗಳನ್ನು ಶಾಲೆಗೆ ಹೋಗದಂತೆ ತಡೆಗಟ್ಟಿ ದೌರ್ಜನ್ಯ ಮಾಡಿದ್ದಾರೆ. ರಾತ್ರಿ ಕುಡಿದು ಬಂದು ಮಹಿಳೆಯರಿಗೆ ಆವಾಚ್ಚ ಶಬ್ಬಗಳಿಂದ ಬೈಯ್ದು ಮಾನಸಿಕವಾಗಿ ಹಿಂಸಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದ ದಲಿತರೆಲ್ಲರೂ ತಮ್ಮ ಅಳಲು ತೋಡಿಕೊಂಡರು. ದೌರ್ಜನ್ಯಕ್ಕೆ ಒಳಗಾದ ನೀಲಪ್ಪ ಮಾದರ, ತಿಪ್ಪಣ್ಣ ಮಾದರ, ಕರಿಯಪ್ಪ ಮಾದರ, ಬಸಪ್ಪ ಮಾದರ, ಮಲ್ಲವ್ವ ಮಾದರ, ನೀಲವ್ವ ಮಾದರ, ಕೆಂಚವ್ವಾ ಮಾದರ, ಯಲ್ಲವ್ವಾ ಮಾದರ ಸೇರಿದಂತೆ ನೂರಾರು ದಲಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಈ ಘಟನೆಗೆ ಕುರಿತು ಅಂದಾನಿಗೌಡ್ರ ಪಾಟೀಲ, ರಾಜಪ್ಪಗೌಡ ಪಾಟೀಲ, ನೀಲಕಂಠಗೌಡ ಪಾಟೀಲ, ಬಸಪ್ಪ ಬೆಣ್ಣೆಪ್ಪನವರ, ಶಂಕ್ರಪ್ಪ ಹೂಗಾರ ಹಾಗೂ ಕರಿಬಸಪ್ಪ ಜಾವೂರ ಅವರ ವಿರುದ್ಧ ದೂರು ನೀಡಲಾಗಿದೆ. ನೀಲಕಂಠಗೌಡ ಪಾಟೀಲ ಹಾಗೂ ಶಂಕ್ರಪ್ಪ ಹೂಗಾರ ಎಂಬುವರನ್ನು ಬಂಧಿಸಲಾಗಿದೆ. ಕರ್ನಾಟಕ ರಾಜ್ಯ ಆದಿಜಾಂಬವ ಮಾದಿಗರ ಸಂಘದವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

No comments:

Post a Comment